ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸದ್ಗುರು ಶ್ರೀ ಮಧುಸೂದನ ಸಾಯಿ ಭರವಸೆ

ಕಾರವಾರ: ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ನಿಸ್ವಾರ್ಥ ಪ್ರೇಮ ಮತ್ತು ನಿಸ್ವಾರ್ಥ ಸೇವೆಯೊಂದೇ ಏಕೈಕ ದಾರಿ ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ನುಡಿದರು.

ಇಂದು ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ “ದಿವ್ಯ ಸಂಜೆ” ಸಂವಾದದಲ್ಲಿ ಪ್ರಸಿದ್ಧ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಉಪದೇಶಕ್ಕಿಂತ ಆಚರಣೆಗೆ ಮೊದಲ ಆದ್ಯತೆ

ಇಂದಿನ ತಂತ್ರಜ್ಞಾನ ಯುಗದಲ್ಲಿ ಎಐ ಹಾಗೂ ಚಾಟ್‌ಜಿಪಿಟಿಯಂತಹ ಸಾಧನಗಳೂ ಪ್ರವಚನ ನೀಡಬಲ್ಲವು, ಆದರೆ ನುಡಿದಂತೆ ನಡೆಯುವುದೇ ನೈಜ ಧರ್ಮ ಎಂದು ಸದ್ಗುರುಗಳು ತಿಳಿಸಿದರು. ಫಿಜಿ, ಆಫ್ರಿಕಾ, ಇರಾನ್ ಹಾಗೂ ಟರ್ಕಿ ದೇಶಗಳಲ್ಲಿ ಕೇವಲ ಬೋಧನೆಗಳ ಬದಲಿಗೆ ಪ್ರಾಯೋಗಿಕ ಸೇವೆಯ ಮುಖಾಂತರ ಜನರ ವಿಶ್ವಾಸ ಸಂಪಾದಿಸಲಾಗಿದೆ. ಪ್ರಾಚೀನ ಗುರುಕುಲ ಪರಂಪರೆಯಂತೆ ಶಿಕ್ಷಣ ವ್ಯವಸ್ಥೆ ಸುಧಾರಿಸಿದಾಗ ಮಾತ್ರ ಜಾಗತಿಕ ಸೋದರತ್ವ ಮೂಡಲು ಸಾಧ್ಯ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಪ್ರೇಮತತ್ವದ ಆಧಾರದಲ್ಲಿ ನಡೆಯುತ್ತಿರುವ ನಮ್ಮ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಹಾಗೂ ಚಿಕಿತ್ಸೆ ಪಡೆಯುವವರು ಸಂಸ್ಥೆಯೊಂದಿಗೆ ಶಾಶ್ವತ ಒಡನಾಟ ಬೆಳೆಸಿಕೊಳ್ಳುತ್ತಾರೆ ಎಂದರು. ಕೋವಿಡ್ ಬಿಕ್ಕಟ್ಟು ಮನುಕುಲಕ್ಕೆ ಅಧ್ಯಾತ್ಮದ ಮಹತ್ವ ಮತ್ತು ಲೌಕಿಕ ಮಿತಿಗಳನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ವಿವರಿಸಿದರು.

ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: 5 ವರ್ಷಗಳ ಕಾಲಾವಕಾಶ

ಕಾರವಾರ ಭಾಗದಲ್ಲಿ ಮುದ್ದೇನಹಳ್ಳಿ ಮಾದರಿಯ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಸಾರ್ವಜನಿಕರ ಹಕ್ಕೊತ್ತಾಯಕ್ಕೆ ಉತ್ತರಿಸಿದ ಸದ್ಗುರುಗಳು, “ದೊಡ್ಡ ಮಟ್ಟದ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಆರ್ಥಿಕ ಸಂಪನ್ಮೂಲ ಅನಿವಾರ್ಯ. ಪ್ರಸ್ತುತ ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರಬರುವಷ್ಟರಲ್ಲಿ, ದಾನಿಗಳ ಬೆಂಬಲ ಹಾಗೂ ಆಸ್ಪತ್ರೆ ಮೂಲಸೌಕರ್ಯ ಸಿದ್ಧಗೊಂಡರೆ ಮುಂದಿನ 5 ವರ್ಷಗಳಲ್ಲಿ ಸುಸಜ್ಜಿತ ಆಸ್ಪತ್ರೆ ತಲೆಯೆತ್ತಲಿದೆ. ಸದ್ಯ ಕಾರ್ಯಾಚರಿಸುತ್ತಿರುವ 2 ಸಾಯಿ ಸ್ವಾಸ್ಥ್ಯ ಕೇಂದ್ರಗಳ ಜತೆಗೆ ಆರೋಗ್ಯ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು” ಎಂದು ಆಶ್ವಾಸನೆ ನೀಡಿದರು.

ವಿದ್ಯಾರ್ಥಿ ಸೃಜನ್ ಅನುಭವ ಮತ್ತು ಗಣ್ಯರ ಉಪಸ್ಥಿತಿ

ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಸಂಸ್ಥೆಗಳ ಮಾರ್ಗದರ್ಶಕ ಡಾ. ಬಿ.ಎನ್. ನರಸಿಂಹ ಮೂರ್ತಿ ಅವರು ಪ್ರಸ್ತಾವನೆಗೈದು, ಮಹಾತ್ಮರು ಲೋಕಕಲ್ಯಾಣಕ್ಕೆ ವಸಂತಕಾಲದಂತೆ ಆಗಮಿಸುತ್ತಾರೆ ಎಂದರು. ವಸತಿ ಶಾಲೆಯ ವಿದ್ಯಾರ್ಥಿ ಸೃಜನ್ ಜಯಪ್ರಕಾಶ್ ಮಾತನಾಡಿ, ಎನ್‌ಐಒಎಸ್ ಪದ್ಧತಿಯಿಂದಾಗಿ ಪಠ್ಯದ ಜೊತೆಗೆ ಸಂಗೀತ, ಯೋಗ ಹಾಗೂ ಕ್ರೀಡೆಗಳಲ್ಲಿ ಪ್ರತಿಭೆ ಬೆಳೆಸಿಕೊಳ್ಳಲು ದೊರೆತ ಅವಕಾಶವನ್ನು ವಿವರಿಸಿದನು.

ಕಾರ್ಯಕ್ರಮದಲ್ಲಿ ಕಾರವಾರ ರಾಮಕೃಷ್ಣಾಶ್ರಮದ ಶ್ರೀ ಭಾವೇಶಾನಂದ ಸ್ವಾಮೀಜಿ, ಮಾಜಿ ಸಚಿವ ಆನಂದ್ ಆಸ್ನೋಟಿಕರ್, ಮಾಜಿ ಶಾಸಕರಾದ ರೂಪಾಲಿ ಎಸ್. ನಾಯ್ಕ ಮತ್ತು ಗಂಗಾಧರ ಭಟ್, ಕೆನರಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಸ್.ಪಿ. ಕಾಮತ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ಪ್ರಸ್ತುತಗೊಂಡ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others