ನಮ್ಮ ದೇಶಕ್ಕೆ ಅಪಾಯ ಇರುವುದು RSS ನಿಂದಲ್ಲ, ಕಾಂಗ್ರೆಸ್ ನಿಂದ:ಕೈ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗರಂ

ಬೆಂಗಳೂರು: ನಮ್ಮ ದೇಶಕ್ಕೆ ಅಪಾಯ ಇರುವುದು RSS ನಿಂದಲ್ಲ, ಕಾಂಗ್ರೆಸ್ ನಿಂದ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪಥಸಂಚಲನದಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಇಬ್ಬರು ಸರ್ಕಾರಿ ಶಿಕ್ಷಕರನ್ನು ಅಮಾನತುಗೊಳಿಸಿರುವ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಕ್ರಮವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಶಿಕ್ಷಕರು ಪಥಸಂಚಲನದಲ್ಲಿ ಭಾಗವಹಿಸಿದ್ದರಿಂದ ಕರ್ನಾಟಕದಲ್ಲಿ ಯಾವುದೇ ಹಾನಿ, ಹಿಂಸಾಚಾರ ಅಥವಾ ಅಡಚಣೆ ಉಂಟಾಗಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ. ರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದರಿಂದ ಅವರು ಮಾಡಿರುವ ದೊಡ್ಡ ತಪ್ಪೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಯಾದಗಿರಿ ಜಿಲ್ಲಾ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷ ಜುಮ್ಮಣ್ಣ ಗುಡಿಮನಿ, ಈ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ, ಅವರು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೆಂಬ ಆರೋಪದ ಕುರಿತು ಸರ್ಕಾರದ ಗಮನಕ್ಕೂ ತಂದಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಇಬ್ಬರು ಶಿಕ್ಷಕರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ತಮ್ಮ ಲಿಖಿತ ವಿವರಣೆಯಲ್ಲಿ ಶಿಕ್ಷಕರು, ಶಾಲೆಯ ಕೆಲಸದ ಅವಧಿ ಮುಗಿದ ಬಳಿಕ ಪಥಸಂಚಲನದಲ್ಲಿ ಭಾಗವಹಿಸಿದ್ದು, ಆ ಸಂದರ್ಭದಲ್ಲಿ ತಾವು ಕರ್ತವ್ಯದಲ್ಲಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅವರ ವಿವರಣೆ ತೃಪ್ತಿಕರವಾಗಿಲ್ಲ ಎಂದು ಇಲಾಖೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮಾನತುಗೊಂಡಿರುವ ಶಿಕ್ಷಕರಲ್ಲಿ ಸುರಪುರ ತಾಲೂಕಿನ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾ ಸಾಹೇಬ್ ದೇಶಮುಖ್ ಹಾಗೂ ಹುಣಸಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಹಾಯಕ ಶಿಕ್ಷಕ ಗುರುರಾಜ್ ಜೋಶಿ ಸೇರಿದ್ದಾರೆ.

ಇಲಾಖೆಯ ಆದೇಶಗಳ ಪ್ರಕಾರ, ಅಣ್ಣಾ ಸಾಹೇಬ್ ದೇಶಮುಖ್ ಮತ್ತು ಗುರುರಾಜ್ ಜೋಶಿ ಅವರು 2025ರ ಅಕ್ಟೋಬರ್ 10 ಮತ್ತು 12ರಂದು ನೆರೆಯ ವಿಜಯಪುರ ಜಿಲ್ಲೆಯ ತಾಳಿಕೋಟೆ ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕರ್ನಾಟಕ ನಾಗರಿಕ ಸೇವೆಗಳ (ನಡತೆ) ನಿಯಮಗಳು, 2021ರ ನಿಯಮ 3(1), 3(2), 3(3), 5 ಮತ್ತು 7 ಅನ್ನು ಶಿಕ್ಷಕರ ಭಾಗವಹಿಸುವಿಕೆ ಉಲ್ಲಂಘಿಸಿದೆ ಎಂದು ಇಲಾಖೆ ಹೇಳಿದೆ. ಶಿಕ್ಷಕರ ನಡೆ ಕರ್ತವ್ಯ ಲೋಪಕ್ಕೆ ಸಮಾನವಾಗಿದ್ದು, ಶಿಸ್ತು ಕ್ರಮಕ್ಕೆ ಅರ್ಹವಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 20ರಂದು ಯಾದಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು ಅಮಾನತು ಆದೇಶ ಹೊರಡಿಸಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others