ನಮ್ಮ ಮಂಡ್ಯ ಜಿಲ್ಲೆಯ ಚರಿತ್ರೆಯ ಪುಟಗಳಲ್ಲಿ ಅದೆಷ್ಟೋ ಸ್ಮಾರಕಗಳಿವೆ. ಟಿಪ್ಪು ಕೋಟೆ, ದರಿಯಾ ದೌಲತ್, ಗುಂಬಜ್… ಇವುಗಳ ಮಧ್ಯೆ ಕಾವೇರಿ ದಡದಲ್ಲಿ ಏಕಾಂಗಿಯಾಗಿ ನಿಂತಿರುವ 73 ಅಡಿ ಎತ್ತರದ ಏಕಶಿಲೆಯ ಗ್ರಾನೈಟ್ ಸ್ತಂಭವೊಂದಿದೆ. ಅದೇ ಇಂದು ನಾವು ನೋಡುತ್ತಿರುವ ಈ ಚಿತ್ರದಲ್ಲಿರುವ ಸ್ತಂಭ – ಜೋಸಿಯಾ ವೆಬ್ಬೆ ಒಬೆಲಿಸ್ಕ್, ಅಥವಾ ನಮ್ಮ ಜನರ ಬಾಯಲ್ಲಿ ‘ರಣಕಂಬ’.
ಈ ಚಿತ್ರವು 1890ರ ಸುಮಾರಿನಲ್ಲಿ ಪ್ರಕಟವಾದ “Quarrying Methods of the Ancients” ಎಂಬ ಪುಸ್ತಕದಲ್ಲಿನ ಚಿತ್ರ. ಇದರ ಕೆಳಗಿನ ಅಡಿ ಟಿಪ್ಪಣಿಯೇ ಈ ಸ್ತಂಭದ ಮಹತ್ವವನ್ನು ಹೇಳುತ್ತದೆ -[Erected in memory of Josiah Webbe, Esq., about the year 1815. All the work was done by Hindu workmen by their customary methods…]
ಯಾರು ಈ ಜೋಸಿಯಾ ವೆಬ್ಬೆ? : ಜೋಸಿಯಾ ವೆಬ್ಬೆ (1767-1804) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅತ್ಯಂತ ಪ್ರಭಾವಿ ಅಧಿಕಾರಿ. ಮದ್ರಾಸ್ನಲ್ಲಿ ಚೀಫ್ ಸೆಕ್ರೆಟರಿ, ನಂತರ ಮೈಸೂರು ಸಂಸ್ಥಾನದ ಮೊದಲ ರೆಸಿಡೆಂಟ್. ಇತಿಹಾಸ ಹೇಳುವ ಪ್ರಕಾರ, ವೆಬ್ಬೆ ಅವರು ಟಿಪ್ಪು ಸುಲ್ತಾನ್ ವಿರುದ್ಧ ಯುದ್ಧ ಮಾಡಬಾರದು, ಟಿಪ್ಪುವನ್ನು ಮರಾಠರು ಮತ್ತು ನಿಜಾಮರ ವಿರುದ್ಧ ಸಮತೋಲನವಾಗಿ ಉಳಿಸಿಕೊಳ್ಳಬೇಕು ಎಂದು ಬ್ರಿಟಿಷರಿಗೇ ಸಲಹೆ ನೀಡಿದ ದೂರದೃಷ್ಟಿಯ ರಾಜತಾಂತ್ರಿಕ. ಆದರೆ ಲಾರ್ಡ್ ವೆಲ್ಲೆಸ್ಲಿ ಅವರ ಯುದ್ಧದ ಹಠಕ್ಕೆ ಅವರ ಮಾತು ನಡೆಯಲಿಲ್ಲ. 1804ರಲ್ಲಿ ನರ್ಮದಾ ನದಿ ದಡದ ಬಳಿ ಅನಾರೋಗ್ಯದಿಂದ ಅವರು ನಿಧನರಾದರು.
ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಮೈಸೂರು ರಾಜ್ಯದ ಬಗೆಗಿನ ಕಾಳಜಿಯನ್ನು ಕಂಡು ಮೈಸೂರಿನ ಮಹಾನ್ ದಿವಾನ್ ಪೂರ್ಣಯ್ಯನವರು ಅವರ ನೆನಪಿಗಾಗಿ ಈ ಬೃಹತ್ ಸ್ಮಾರಕವನ್ನು ನಿರ್ಮಿಸಿದರು. ಇದು ಬ್ರಿಟಿಷ್ ಅಧಿಕಾರಿಯೊಬ್ಬರಿಗೆ ಭಾರತೀಯ ಮೈಸೂರು ದಿವಾನರೊಬ್ಬರು ಕಟ್ಟಿದ ಅಪರೂಪದ ಸ್ಮಾರಕ.
ಭಾರತೀಯ ತಂತ್ರಜ್ಞಾನದ ಬೆರಗು.ಈ ಸ್ತಂಭದ ನಿಜವಾದ ಹೆಮ್ಮೆ ಅದನ್ನು ಹೇಗೆ ತಂದರು ಮತ್ತು ನಿಲ್ಲಿಸಿದರು ಎಂಬುದರಲ್ಲಿ ಇದೆ. ಈ ಚಿತ್ರದ ಎಡಭಾಗದಲ್ಲಿ ಕಾಣುವ ತಗ್ಗಿನ ಮರದ ಗಾಡಿ (low timber truck) ಗಮನಿಸಿ. ಬೆಂಗಳೂರು ಮಿರರ್ ಪತ್ರಿಕೆಯ ವರದಿ ಮತ್ತು ಇತಿಹಾಸ ಸಂಶೋಧಕ ನಿಧಿನ್ ಒಳಿಕಾರ ಅವರ ಸಂಶೋಧನೆ ಪ್ರಕಾರ, ಸುಮಾರು 73 ಅಡಿ ಉದ್ದ, 6 ಅಡಿ ಅಗಲದ ಒಂದೇ ಬಂಡೆಯ ಗ್ರಾನೈಟ್ ಕಲ್ಲನ್ನು, ಕ್ವಾರಿಯಿಂದ ಎರಡು ಮೈಲು ದೂರದ ಕಲ್ಲುಬಂಡೆಗಳ ತುಂಬಿದ ದಾರಿಯಲ್ಲಿ ಈ ಮರದ ಗಾಡಿಯಲ್ಲೇ ಸಾಗಿಸಲಾಯಿತು.
ಆ ಕಾಲದಲ್ಲಿ ಯುರೋಪಿನಲ್ಲೂ ಇಂತಹ ಬೃಹತ್ ಏಕಶಿಲೆಯನ್ನು ಸಾಗಿಸುವುದು ಅಸಾಧ್ಯದ ಕೆಲಸವಾಗಿತ್ತು. ಬ್ರಿಟಿಷರು ಭಾರತೀಯರನ್ನು ತಂತ್ರಜ್ಞಾನದಲ್ಲಿ ಕಡಿಮೆ ಎಂದು ಭಾವಿಸಿದ್ದರು. ಆದರೆ ನಮ್ಮ ಹಿಂದೂ ಕುಶಲಕರ್ಮಿಗಳು ತಮ್ಮ ಸಾಂಪ್ರದಾಯಿಕ ವಿಧಾನದಿಂದ, ಯಾವುದೇ ಆಧುನಿಕ ಯಂತ್ರವಿಲ್ಲದೆ ಇದನ್ನು ಮಾಡಿ ತೋರಿಸಿದರು. ಬ್ರಿಟಿಷ್ ಎಂಜಿನಿಯರ್ಗಳು ಅಚ್ಚರಿಗೊಂಡು ಈ ಗಾಡಿಯ ನಕ್ಷೆಯನ್ನು ಬ್ರಿಟಿಷ್ ಲೈಬ್ರರಿಗಾಗಿ ಚಿತ್ರಿಸಿಕೊಂಡು ಹೋಗಿ, ಎಡಿನ್ಬರ್ಗ್ನ ಜರ್ನಲ್ನಲ್ಲಿ ಲೇಖನವನ್ನೇ ಬರೆದರು. ಇದನ್ನು ಇಂದು ‘ಸಗಣೆ ಬಂಡಿ’ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ.
ಎರಡು ಒಬೆಲಿಸ್ಕ್ಗಳ ಗೊಂದಲ ಬೇಡ.
ಶ್ರೀರಂಗಪಟ್ಟಣದಲ್ಲಿ ಎರಡು ಒಬೆಲಿಸ್ಕ್ಗಳಿವೆ ಎಂಬುದನ್ನು ನಮ್ಮ ಓದುಗರು ತಿಳಿದುಕೊಳ್ಳಬೇಕು.
ವೆಬ್ಬೆ ಒಬೆಲಿಸ್ಕ್ (ರಣ ಕಂಬ):ಇದು 1815ರಲ್ಲಿ ಪೂರ್ಣಯ್ಯನವರು ಕಟ್ಟಿಸಿದ್ದು, ಈ ಚಿತ್ರದಲ್ಲಿರುವುದು. ಇದು ಕಾವೇರಿ ದಡದ ಉತ್ತರ ಭಾಗದಲ್ಲಿ, ಹಳೇ ಬ್ರಿಟಿಷ್ ಬಂಗಲೆಗಳ ಬಳಿ ಇದೆ. ಇದರ ಸುತ್ತ ಕಬ್ಬಿಣದ ಬೇಲಿ ಇದೆ.
ವಾರ್ ಮೆಮೋರಿಯಲ್ ಒಬೆಲಿಸ್ಕ್: ಬ್ರಿಟಿಷರು 1799ರ ಶ್ರೀರಂಗಪಟ್ಟಣ ಮುತ್ತಿಗೆಯಲ್ಲಿ ಮಡಿದ ಬ್ರಿಟಿಷ್ ಸೈನಿಕರ ನೆನಪಿಗೆ ಕಟ್ಟಿಸಿದ್ದು. ಇದು ಕೋಟೆಯ ವಾಯುವ್ಯ ಮೂಲೆಯಲ್ಲಿದೆ. ಇದರ ಮೇಲೆ ನಾಲ್ಕು ಫಿರಂಗಿ ಗುಂಡುಗಳಿವೆ.ನಮ್ಮ ಜನರು ಎರಡನ್ನೂ ಒಂದೇ ಎಂದು ತಿಳಿದು ಗೊಂದಲ ಕ್ಕೊಳಗಾಗುತ್ತಾರೆ.
ಇಂದಿನ ಸ್ಥಿತಿ – ನಿರ್ಲಕ್ಷ್ಯದ ಸಂಕೇತ.ಇಂದು ಈ ಮಹಾನ್ ತಂತ್ರಜ್ಞಾನದ ಸಂಕೇತವಾಗಿರುವ ರಣ ಕಂಬವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರವಾಸಿಗರು ಟಿಪ್ಪು ಸಮಾಧಿಗೆ ಹೋಗುತ್ತಾರೆ, ಆದರೆ ಈ 200 ವರ್ಷಗಳ ಇತಿಹಾಸದ ಕಂಬವನ್ನು ನೋಡಲು ಯಾರೂ ಹೋಗುವುದಿಲ್ಲ. ನಮ್ಮ ಮಂಡ್ಯ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಈ ಸ್ಥಳವನ್ನು ಅಭಿವೃದ್ಧಿಪಡಿಸಿ, ಇಲ್ಲಿ ಒಂದು ಮಾಹಿತಿ ಫಲಕ ಹಾಕಿದರೆ, ನಮ್ಮ ಹಿಂದಿನವರ ತಂತ್ರಜ್ಞಾನದ ಹೆಮ್ಮೆಯನ್ನು ಜಗತ್ತಿಗೆ ತೋರಿಸಬಹುದು.
ಶ್ರೀರಂಗಪಟ್ಟಣವು ಕೇವಲ ಯುದ್ಧಗಳ ನಾಡಲ್ಲ, ಅದು ಭಾರತೀಯ ಕುಶಲಕರ್ಮಿಗಳ, ಎಂಜಿನಿಯರ್ಗಳ ನಾಡು ಎಂಬುದಕ್ಕೆ ಈ ಏಕಶಿಲೆಯ ಕಂಬವೇ ಸಾಕ್ಷಿ. ಬ್ರಿಟಿಷರು ಕೂಡ ತಲೆಬಾಗಿ ನಮಸ್ಕರಿಸಿದ ನಮ್ಮ ಪೂರ್ವಜರ ಕೌಶಲ್ಯಕ್ಕೆ ಇದೊಂದು ಜೀವಂತ ಸ್ಮಾರಕವಾಗಿದೆ ಎಂದು ಶ್ರೀರಂಗಪಟ್ಟಣ ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ತಿಳಿಸಿದ್ದಾರೆ.





