ಶ್ರೀರಂಗಪಟ್ಟಣ: ಆಗಸ್ಟ್ 27ರ ಸಂಜೆ ಮಂಡ್ಯ ಭಾಗದ ರೈತ ಸಮಸ್ಯೆ ಮತ್ತು ಹೊಸ ಪ್ರಾದೇಶಿಕ ಪಕ್ಷದ ಕಲ್ಪನೆಯ ಕುರಿತು ನಟ-ಹೋರಾಟಗಾರ ಚೇತನ್ ಅಹಿಂಸಾ ಅವರು ಶ್ರೀರಂಗಪಟ್ಟಣದಲ್ಲಿ ಗುರುವಾರ ಪೊಲಿಟಿಕಲ್ ಪ್ರಿವ್ಯೂ ಮೀಟ್ಸ್ ನಲ್ಲಿ ಮಾತನಾಡಿದರು.
ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಅಧಿಕೃತವಾಗಿ ಆರಂಭಿಸಲಾಗುವುದು ಎಂದು ಮಂಗಳೂರಿನಲ್ಲಿ ಘೋಷಿಸಿದ್ದೆ, ಅದೇ ಮಾತನ್ನು ಇಲ್ಲಿಯೂ ಪುನರುಚ್ಚರಿಸುತ್ತಿದ್ದೇನೆ ಎಂದರು.
ಹೊಸ ಪಕ್ಷದ ನೋಂದಣಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇದು ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ವೈಜ್ಞಾನಿಕ ಮನೋಭಾವ ಎಂಬ ಸಂವಿಧಾನದ ಮೂಲ ತತ್ವಗಳ ಮೇಲೆ ಸ್ಥಾಪಿತವಾಗಲಿದೆ. ಇದು ಯಾವುದೇ ಸ್ಟಾರ್ ಪವರ್ ಅಥವಾ ಫ್ಯಾನ್ ಕ್ಲಬ್ ಸುತ್ತ ಕಟ್ಟುವ ಪಕ್ಷವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ನಾವು ರೈತರು, ಹೋರಾಟಗಾರರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಮತ್ತು ವರ್ಷಗಳಿಂದ ಜನಪರ ಹೋರಾಟದಲ್ಲಿ ತೊಡಗಿರುವ ಯುವಕರನ್ನು ಒಟ್ಟುಗೂಡಿಸುತ್ತಿದ್ದೇವೆ. ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ್ ಮತ್ತು ಕಾನ್ಷಿರಾಮ್ ಅವರ ಸಿದ್ಧಾಂತಗಳ ಮಾರ್ಗದರ್ಶನದಲ್ಲಿ ಪ್ರಾದೇಶಿಕ ರಾಜಕೀಯ ಚಳುವಳಿಯನ್ನು ಬಲಪಡಿಸುತ್ತಿದ್ದೇವೆ” ಎಂದು ಚೇತನ್ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಇದು ಚುನಾವಣ ಭಾಷಣವಲ್ಲ, ಜನರೇ ತಮ್ಮ ಸಮಸ್ಯೆ ಹೇಳುವ ಸಂವಾದ ಎಂದು ಬಣ್ಣಿಸಿದ ಚೇತನ್ ಅವರು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ವಿಳಂಬ ಕೆರೆಗಳ ಒತ್ತುವರಿ, ಪ್ರವಾಸೋದ್ಯಮದ ಹೆಸರಿನಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಇಲ್ಲದಿರುವುದು. ಪುರಾತತ್ವ ಇಲಾಖೆಯ ನಿರ್ಬಂಧದಿಂದ ಮನೆ ಕಟ್ಟಲು ಆಗದಿರುವ ಸಮಸ್ಯೆ ಹಾಗೂ ಸ್ಮಾರಕಗಳ ಸಂರಕ್ಷಣೆ. ಕಾವೇರಿ ನೀರು ಹಂಚಿಕೆ ಮತ್ತು ರೈತ ಪ್ರತಿಭಟನೆಗಳು ಈ ಕುರಿತು ಮಾತನಾಡಿದ ಅವರು, “ನೀವು ನಿಮ್ಮ ಸಮಸ್ಯೆ ಹೇಳಿ, ನಾವು ನಿಮ್ಮ ಅಜೆಂಡಾ ಮಾಡುತ್ತೇವೆ” ಎಂಬುದು ಈ ಭೇಟಿಯ ಉದ್ದೇಶವಾಗಿದೆ ಎಂದರು.
2028ರ ವಿಧಾನಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ.ಎಸ್.ವೆಂಕಟೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಜಯಶಂಕರ್, ಚಿಕ್ಕತಮ್ಮೇಗೌಡ, ಕಡತನಾಳು ಧರ್ಮೇಶ್, ಶ್ರೀನಿವಾಸ್, ಚಂದಗಾಲು ಶಿವಕುಮಾರ್ ಸೇರಿದಂತೆ ಹಲವು ಪ್ರಗತಿಪರ ಹೋರಾಟಗಾರರು ಮತ್ತು ಸ್ಥಳೀಯರು ಭಾಗವಹಿಸಿದ್ದರು.





