ಬೆಂಗಳೂರು: ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಕಾಲೇಜು ಸಹಪಾಠಿ ನೀಡುತ್ತಿದ್ದ ನಿರಂತರ ಮಾನಸಿಕ ಹಿಂಸೆ ತಾಳಲಾರದೆ 22 ವರ್ಷದ ಯುವತಿಯೊಬ್ಬಳು ಕೆರೆಗೆ ಧುಮುಕಿ ಪ್ರಾಣ ಬಿಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವತಿ
ಮೃತ ದುರ್ದೈವಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಲಮಕ್ಕಿ ಮೂಲದ ವಾಣಿ (22) ಎಂದು ಗುರುತಿಸಲಾಗಿದೆ. ಉತ್ತಮ ಭವಿಷ್ಯದ ಕನಸಿನೊಂದಿಗೆ ಸುಮಾರು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಈಕೆ, ನಗರದ ಪ್ರಸಿದ್ಧ ಚಿನ್ನದ ಆಭರಣ ಮಳಿಗೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಆದರೆ ಶನಿವಾರ ಹೆಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಅಗರ ಕೆರೆಗೆ ಹಾರಿ ಜೀವ ಕಳೆದುಕೊಂಡಿದ್ದಾರೆ.
ಡೆತ್‌ನೋಟ್‌ನಲ್ಲಿ ಬಿಚ್ಚಿಟ್ಟ ಕರಾಳ ಸತ್ಯ
ಆತ್ಮಹತ್ಯೆಗೂ ಮುನ್ನ ವಾಣಿ ಬರೆದಿಟ್ಟಿರುವ ಮರಣಪತ್ರದಲ್ಲಿ ತನಗಾದ ಅನ್ಯಾಯ ಮತ್ತು ನೋವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಕಾಲೇಜು ದಿನಗಳ ಕ್ಲಾಸ್‌ಮೇಟ್ ಬಳಿ ತನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳಿದ್ದು, ಅವುಗಳನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿ ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. ತಾನು ಕರೆದಾಗಲೆಲ್ಲಾ ತನ್ನ ಕೊಠಡಿಗೆ ಬರಬೇಕೆಂದು ಪೀಡಿಸುತ್ತಿದ್ದ ಆತ, ತಪ್ಪಿದರೆ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇಡೀ ಕುಟುಂಬದ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ.
ಆರೋಪಿಗೆ ಕಠಿಣ ಶಿಕ್ಷೆಗೆ ಮನವಿ, ಆರೋಪಿ ಬಂಧನಕ್ಕೆ ಬಲೆ
ಈ ಅಸಹನೀಯ ಮಾನಸಿಕ ಕಿರುಕುಳವನ್ನು ಯಾರಿಗೂ ಹೇಳಿಕೊಳ್ಳಲಾಗದೆ ತೀವ್ರ ಖಿನ್ನತೆಗೆ ಒಳಗಾಗಿ ಅಂತಿಮ ಹೆಜ್ಜೆ ಇಡುತ್ತಿರುವುದಾಗಿ ತಿಳಿಸಿರುವ ಯುವತಿ, ತನ್ನ ಸಾವಿಗೆ ನೇರ ಕಾರಣನಾದ ಆ ಯುವಕನಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡದೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೋರಿದ್ದಾರೆ. ಜೊತೆಗೆ ತನ್ನ ಕುಟುಂಬದ ಮೇಲಿರುವ ಅಪಾರ ಪ್ರೀತಿಯನ್ನು ಪತ್ರದಲ್ಲಿ ನೆನೆದಿದ್ದಾರೆ. ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.





