ಬೆಂಗಳೂರು: ಖಾಸಗಿ ಶಾಲೆಗಳಿಗೆ ಸರ್ಕಾರಿ ಪಠ್ಯಪುಸ್ತಕಗಳನ್ನು ಒದಗಿಸಬೇಕು ಎಂಬ ಬೇಡಿಕೆಯೂ ಪರಿಶೀಲನೆಯಲ್ಲಿದೆ. ಅಗತ್ಯ ಹಣ ಪಾವತಿಸಲು ಖಾಸಗಿ ಶಾಲೆಗಳು ಸಿದ್ಧವಿದ್ದು, ಈ ಬೇಡಿಕೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೂ ಸರ್ಕಾರಿ ನೌಕರರಿಗೆ ನೀಡಲಾಗುವ ಮನೆ ಬಾಡಿಗೆ ಭತ್ಯೆ ವಿಸ್ತರಿಸುವ ಬೇಡಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ ಸಮಿತಿ ಶಿಫಾರಸುಗಳನ್ನು ಮಾಡಿದೆ.
ಅರ್ಹ ಖಾಸಗಿ ಶಾಲಾ ಶಿಕ್ಷಕರನ್ನೂ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಅಕ್ಷಯ’ ಕಾರ್ಯಕ್ರಮವನ್ನು ಸ್ಮರಿಸಿದ ಅವರು, ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಹಾಗೂ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು. ಈ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದ ಮಕ್ಕಳಿಗೆ ದಿನಕ್ಕೆ ಒಂದು ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿತ್ತು ಎಂದು ಹೇಳಿದರು.
ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಒಂದು ಕೋಟಿಗೂ ಹೆಚ್ಚು ಮಕ್ಕಳು ಬರುತ್ತಿದ್ದು, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.
ಖಾಸಗಿ ಶಾಲೆಗಳ ಶಿಕ್ಷಕರನ್ನು ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಪರಿಗಣಿಸುವ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಈ ಕುರಿತು ಮತ್ತಷ್ಟು ಚರ್ಚೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಖಾಸಗಿ ಶಾಲೆಗಳು ಮುಂದಿಟ್ಟಿರುವ ವಿವಿಧ ಬೇಡಿಕೆಗಳನ್ನೂ ಪರಿಶೀಲಿಸಲಾಗುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಶಾಲೆಗಳ ಸಮಯ ಬದಲಾವಣೆ ಮಾಡುವಂತೆ ಮನವಿ ಮಾಡಲಾಗಿದೆ. ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.





