ವಾಟ್ಸ್‌ಆ್ಯಪ್ ಬಿಸಿನೆಸ್ ಮೆಸೇಜ್ ಉಚಿತವಲ್ಲ: ತೆರಬೇಕು ಶುಲ್ಕ

ನವದೆಹಲಿ: ದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುವ ಸಂಸ್ಥೆಗಳು ಗ್ರಾಹಕರೊಂದಿಗೆ ಸಂವಹನ ನಡೆಸಲು ಬಳಸುವ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ನ ದರಪಟ್ಟಿಯನ್ನು ಮೆಟಾ ಕಂಪನಿಯು ಪರಿಷ್ಕರಿಸಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ಹೊಸ ನಿಯಮಾವಳಿಗಳ ಅನ್ವಯ, ಈವರೆಗೆ ಉಚಿತವಾಗಿದ್ದ ಪ್ರಮುಖ ಸೇವೆಗಳು ಇನ್ಮುಂದೆ ಶುಲ್ಕದ ವ್ಯಾಪ್ತಿಗೆ ಬರಲಿವೆ. ವಿಶೇಷವಾಗಿ 24 ಗಂಟೆಗಳ ಒಳಗಾಗಿ ರವಾನೆಯಾಗುತ್ತಿದ್ದ ಆರ್ಡರ್ ಹಾಗೂ ಡೆಲಿವರಿ ಸಂಬಂಧಿತ ಸಂದೇಶಗಳಿಗೆ ಇನ್ಮುಂದೆ ಕಂಪನಿಗಳು ಹಣ ತೆರಬೇಕಾಗುತ್ತದೆ.

ಈ ದರ ಬದಲಾವಣೆಯು ಕೇವಲ ಎಪಿಐ ಆಧಾರಿತ ‘ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್’ ಬಳಸುವ ಮಧ್ಯಮ ಮತ್ತು ಬೃಹತ್ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದು, ಸಣ್ಣ ವ್ಯಾಪಾರಿಗಳ ‘ವಾಟ್ಸ್‌ಆ್ಯಪ್ ಬಿಸಿನೆಸ್ ಆ್ಯಪ್’ ಹಾಗೂ ಸಾರ್ವಜನಿಕರ ಸಾಮಾನ್ಯ ವಾಟ್ಸ್‌ಆ್ಯಪ್‌ಗೆ ಯಾವುದೇ ರೀತಿಯಲ್ಲೂ ಅನ್ವಯಿಸುವುದಿಲ್ಲ.

24 ಗಂಟೆಗಳ ಉಚಿತ ಸೇವಾ ನಿಯಮಕ್ಕೆ ಕೊನೆ

ಇಷ್ಟು ದಿನಗಳ ಕಾಲ ಗ್ರಾಹಕರಿಂದ ಮೆಸೇಜ್ ಬಂದ 24 ಗಂಟೆಗಳ ಕಾಲಾವಧಿಯೊಳಗೆ ಸಂಸ್ಥೆಗಳು ಉಚಿತವಾಗಿ ಪ್ರತಿಕ್ರಿಯಿಸಲು, ಸಾಮಗ್ರಿಗಳ ಖರೀದಿ ಖಚಿತಪಡಿಸಲು ಹಾಗೂ ಸರಕು ಸಾಗಣೆಯ ವಿವರ ನೀಡಲು ಅವಕಾಶವಿತ್ತು. ಆದರೆ ಅಕ್ಟೋಬರ್ 1 ರಿಂದ ಈ ವಿನಾಯಿತಿಯನ್ನು ಹಿಂಪಡೆಯಲಾಗುತ್ತಿದ್ದು, 24 ಗಂಟೆಯೊಳಗೇ ಕಳುಹಿಸಿದರೂ ಯುಟಿಲಿಟಿ ಮೆಸೇಜ್‌ಗಳಿಗೆ ಶುಲ್ಕ ಅನ್ವಯಿಸಲಿದೆ. ಗ್ರಾಹಕರ ಸಾಮಾನ್ಯ ವಿಚಾರಣೆಗಳಿಗೆ ಉತ್ತರಿಸುವ ಸರ್ವಿಸ್ ಮೆಸೇಜ್‌ಗಳ ಪೈಕಿ ಪ್ರತಿ ಬಿಸಿನೆಸ್ ನಂಬರ್‌ಗೆ ತಿಂಗಳಿಗೆ ಮೊದಲ 1,000 ಸಂದೇಶಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದ್ದು, ಆ ಮಿತಿ ಮೀರಿದ ಬಳಿಕ ಪ್ರತಿಯೊಂದು ಪ್ರತಿಕ್ರಿಯೆಗೂ ನಿಗದಿತ ದರ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ನೂತನ ದರಗಳು ಹಾಗೂ ಲೆಕ್ಕಾಚಾರ

ಮೆಟಾ ನಿಗದಿಪಡಿಸಿರುವ ಪರಿಷ್ಕೃತ ದರಗಳ ಪ್ರಕಾರ, ಆರ್ಡರ್ ಮತ್ತು ಡೆಲಿವರಿ ಅಪ್‌ಡೇಟ್ ಒಳಗೊಂಡ ಯುಟಿಲಿಟಿ ಸಂದೇಶ ತಲುಪಿದಾಗ ತೆರಿಗೆ ರಹಿತವಾಗಿ ಪ್ರತಿ ಮೆಸೇಜ್‌ಗೆ ₹0.115 ನಿಗದಿಪಡಿಸಲಾಗಿದೆ. ಇದಕ್ಕೆ ಶೇ. 18 ರಷ್ಟು ಜಿಎಸ್‌ಟಿ ಸೇರಿದಾಗ ಒಟ್ಟು ಮೊತ್ತ ಸರಿಸುಮಾರು ₹0.136 ಆಗಲಿದೆ. ಉದಾಹರಣೆಗೆ, ಒಂದು ಸಂಸ್ಥೆಯು ತಿಂಗಳಿಗೆ 1,000 ಆರ್ಡರ್ ವಿವರಗಳನ್ನು ಗ್ರಾಹಕರಿಗೆ ರವಾನಿಸಿದರೆ ಜಿಎಸ್‌ಟಿ ಸೇರಿ ಸುಮಾರು ₹135.70 ವೆಚ್ಚವಾಗಲಿದೆ. ಇನ್ನು ಪ್ರಚಾರ ಹಾಗೂ ರಿಯಾಯಿತಿ ಪ್ರಕಟಣೆಗಳ ಮಾರ್ಕೆಟಿಂಗ್ ಸಂದೇಶಗಳಿಗೆ ಪ್ರತಿ ಮೆಸೇಜ್‌ಗೆ ₹0.8631 ದರವಿದ್ದರೆ, ಒಟಿಪಿಗಳಂತಹ ದೃಢೀಕರಣ ಸಂದೇಶಗಳಿಗೆ ತೆರಿಗೆ ರಹಿತವಾಗಿ ₹0.115 ಶುಲ್ಕವಿದೆ. ಉಚಿತ ಮಿತಿಯಾದ 1,000 ಸರ್ವಿಸ್ ಸಂದೇಶಗಳು ಮುಗಿದ ನಂತರದ ಹೆಚ್ಚುವರಿ ಸೇವಾ ಸಂದೇಶಗಳಿಗೂ ಇದೇ ₹0.115 ದರ ಅನ್ವಯವಾಗುತ್ತದೆ.

ಮುಂದುವರಿಯಲಿರುವ ಉಚಿತ ಸೌಲಭ್ಯಗಳು

ಎಲ್ಲಾ ಸೇವೆಗಳಿಗೂ ಮೆಟಾ ಶುಲ್ಕ ವಿಧಿಸುತ್ತಿಲ್ಲ. ಪ್ರತಿಯೊಂದು ನೋಂದಾಯಿತ ಉದ್ಯಮ ಖಾತೆಗೂ ಮಾಸಿಕ 1,000 ಸರ್ವಿಸ್ ಸಂದೇಶಗಳು ಸಂಪೂರ್ಣ ಉಚಿತವಾಗಿರಲಿವೆ. ಇದರ ಜೊತೆಗೆ ಫೇಸ್‌ಬುಕ್ ಜಾಹೀರಾತುಗಳು ಅಥವಾ ಪೇಜ್‌ಗಳಲ್ಲಿನ ‘ಕ್ಲಿಕ್-ಟು-ವಾಟ್ಸ್‌ಆ್ಯಪ್’ ಲಿಂಕ್ ಮೂಲಕ ಗ್ರಾಹಕರು ಸಂಪರ್ಕಿಸಿದರೆ ಲಭ್ಯವಾಗುವ 72 ಗಂಟೆಗಳ ಉಚಿತ ಸಂವಹನ ಅವಧಿಯನ್ನು ಸಂಸ್ಥೆ ಮುಂದುವರಿಸಿದೆ. ಜಾಹೀರಾತು ಸೇವೆಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮೂರು ದಿನಗಳ ವಿನಾಯಿತಿಯನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ.

ಸಾಮಾನ್ಯ ಗ್ರಾಹಕರಿಗೆ ಎಂದಿನಂತೆ ಉಚಿತ

ಮೆಟಾದ ಈ ನಿರ್ಧಾರದಿಂದಾಗಿ ವಾಟ್ಸ್‌ಆ್ಯಪ್ ಮೂಲಕ ಗ್ರಾಹಕರಿಗೆ ಮಾಹಿತಿ ರವಾನಿಸುವ ವ್ಯಾಪಾರ ಸಂಸ್ಥೆಗಳ ನಿರ್ವಹಣಾ ವೆಚ್ಚ ಹೆಚ್ಚಲಿದೆ. ಆದರೆ ಸಾಮಾನ್ಯ ಜನರಿಗೆ ಅಥವಾ ಗ್ರಾಹಕರಿಗೆ ಯಾವುದೇ ರೀತಿಯ ಶುಲ್ಕದ ಹೊರೆ ಇರುವುದಿಲ್ಲ. ಗ್ರಾಹಕರು ಎಂದಿನಂತೆ ಉಚಿತವಾಗಿ ಸಂಸ್ಥೆಗಳಿಗೆ ಸಂದೇಶ ಕಳುಹಿಸಬಹುದು ಹಾಗೂ ಉಚಿತವಾಗಿಯೇ ಆರ್ಡರ್ ವಿವರ ಮತ್ತು ಸಂದೇಶಗಳನ್ನು ಸ್ವೀಕರಿಸಬಹುದಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others