ಬೆಂಗಳೂರು:ನಮ್ಮ ಕುಟುಂಬದ ಏಳು-ಬೀಳಿನ ಸಮಯದಲ್ಲೂ ತಾಯಿ ಸಮಚಿತ್ತ ಕಾಪಾಡಿಕೊಂಡಿದ್ದರು. ಅವರಷ್ಟು ದೈವ ಭಕ್ತರು ಇನ್ನೊಬ್ಬರಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರದಲ್ಲಿರುವ ಮನೆಗೆ ಓದಲು ಬರುತ್ತಿದ್ದ ಮಕ್ಕಳಿಗೂ ವಾರದನ್ನವನ್ನು ನೀಡುತ್ತಿದ್ದರು ಎಂದು ನೆನಪಿಸಿಕೊಂಡರು.ಕಷ್ಟವಾಗಲಿ, ಸುಖವಾಗಲಿ ಹೇಗೆ ಬದುಕಬೇಕು ಎಂಬುದನ್ನು ಅವರು ಕಲಿಸಿಕೊಟ್ಟರು. ಮನೆಗೆ ಬರುವ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು.
ನಾವು ದಾರಿ ತಪ್ಪಿದಾಗಲೆಲ್ಲ ತಿದ್ದಿ ಸರಿದಾರಿಗೆ ತರುತ್ತಿದ್ದರು. ಕಳೆದ ಒಂದು ವರ್ಷದಿಂದ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಮನೆಗೆ ಬಂದವರಿಗೆ ʼಊಟ ಮಾಡಿʼ ಎಂದು ಹೇಳುವುದಷ್ಟೇ ಅವರ ಮಾತಾಗಿತ್ತು ಎಂದು ನೋವನ್ನು ವ್ಯಕ್ತಪಡಿಸಿದರು.
ತಾಯಿ ಎಂದರೆ ದೇವರು. ಅವರ ಹಿತನುಡಿಗಳು, ಸಲಹೆಗಳು ಮತ್ತು ಉಪದೇಶಗಳೇ ನಮ್ಮ ಬದುಕಿಗೆ ದಾರಿ ತೋರಿಸಿವೆ. ನಾವು ಒಳ್ಳೆಯ ದಾರಿಯಲ್ಲಿ ನಡೆಯಲು ಕಾರಣವೇ ತಾಯಿ ನೀಡಿದ ಸಂಸ್ಕಾರ ಎಂದು ಕುಮಾರಸ್ವಾಮಿ ಹೇಳಿದರು.
ತಾಯಿಯ ಪಾರ್ಥಿವ ಶರೀರದ ದರ್ಶನಕ್ಕೆ ಇಂದು ಬೆಳಿಗ್ಗೆ 11 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಹೊಳೆನರಸೀಪುರದಲ್ಲಿ ಅಂತಿಮ ದರ್ಶನದ ನಂತರ, ಮಾವಿನಕೆರೆ ರಂಗನಾಥಸ್ವಾಮಿ ದೇವಸ್ಥಾನದ ಸಮೀಪ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಜೆಡಿಎಸ್ ನಾಯಕ ಹಾಗೂತಮ್ಮ ತಾಯಿ ಚೆನ್ನಮ್ಮ ಅವರನ್ನು ನೆನೆದು ಭಾವುಕರಾದರು. ತಾಯಿಯ ಜೊತೆ ಕಳೆದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.





