ಸಂಸತ್ತು ಒಪ್ಪಿಗೆ ನೀಡಿದ “ಸ್ವಾತಂತ್ರ್ಯ ಕಾಯ್ದೆ ದಿನ” ಸಮರ್ಪಣಾ ಟ್ರಸ್ಟ್ ವತಿಯಿಂದ ವೀರರಿಗೆ ನಮನ

ಶ್ರೀರಂಗಪಟ್ಟಣ: ಬ್ರಿಟಿಷ್ ಸಂಸತ್ತಿನಲ್ಲಿ 1947 ರ ಜುಲೈ 18 ರಂದು ‘ಭಾರತೀಯ ಸ್ವಾತಂತ್ರ್ಯ ಕಾಯ್ದೆ’ಗೆ ಅಂತಿಮ ಒಪ್ಪಿಗೆ ದೊರೆತ ದಿನ. ಈ ಐತಿಹಾಸಿಕ ಕಾಯ್ದೆಯ ಫಲವಾಗಿಯೇ ಆಗಸ್ಟ್ 15, 1947 ರಂದು ಭಾರತ-ಪಾಕಿಸ್ತಾನ ವಿಭಜನೆಯಾಗಿ, ನಮಗೆ ಸ್ವತಂತ್ರ ಭಾರತ ದೊರೆಯಿತು.

ಈ ಮಹತ್ವದ ದಿನವನ್ನು ಸ್ಮರಿಸುವ ಸಲುವಾಗಿ ಶ್ರೀರಂಗಪಟ್ಟಣದ ಸಮರ್ಪಣಾ ಟ್ರಸ್ಟ್ ವತಿಯಿಂದ ಇಂದು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಕೆ ಎಸ್ ಜಯಶಂಕರ್ , “ಜುಲೈ 18 ಕೇವಲ ಒಂದು ದಿನಾಂಕವಲ್ಲ. ಇದು ಕೋಟ್ಯಂತರ ಭಾರತೀಯರ ನೂರಾರು ವರ್ಷಗಳ ಹೋರಾಟಕ್ಕೆ ಸಿಕ್ಕ ಮಾನ್ಯತೆ. ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲ್ ಲಜಪತ್ ರೈ ಸೇರಿದಂತೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದಲೇ ಇಂದು ನಾವು ಸ್ವತಂತ್ರವಾಗಿ ಉಸಿರಾಡುತ್ತಿದ್ದೇವೆ” ಎಂದು ನುಡಿದರು.

ಸ್ವಾತಂತ್ರ್ಯ ಕಾಯ್ದೆಗೆ ಬ್ರಿಟಿಷ್ ಸಂಸತ್ತು ಒಪ್ಪಿಗೆ ನೀಡಿದ ಬಳಿಕ, 28 ದಿನಗಳಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಉದಯವಾಯಿತು. ಆದರೆ ಈ ಸ್ವಾತಂತ್ರ್ಯದ ಹಿಂದೆ ಅಪಾರ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಇತಿಹಾಸವಿದೆ ಎಂದು ಟ್ರಸ್ಟ್ ಸ್ಮರಿಸಿತು.

ಕಾರ್ಯಕ್ರಮದ ಕೊನೆಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಎರಡು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು. “ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಟ್ರಸ್ಟ್ ಪ್ರತಿಜ್ಞೆ ಮಾಡಿತು.

Share it :

Leave a Reply

Your email address will not be published. Required fields are marked *