ಇತಿಹಾಸಿಕ ನಗರ ಶ್ರೀರಂಗಪಟ್ಟಣದ ಮಹತ್ವ- ಕಲ್ಲಿನಲ್ಲಿ ಇತಿಹಾಸ ಬರೆದ ಬಿ.ಎಲ್. ರೈಸ್ : ಇದನ್ನೊಮ್ಮೆ ಓದಿ

ಶ್ರೀರಂಗಪಟ್ಟಣ : ನಾವು ಇವತ್ತು ಶ್ರೀರಂಗಪಟ್ಟಣವನ್ನು ‘ಇತಿಹಾಸಿಕ ನಗರ’ ಎಂದು ಕರೆಯುತ್ತೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಬಿ.ಎಲ್. ರೈಸ್” ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಆದರೆ ಬೆಂಜಮಿನ್ ಲೂಯಿಸ್ ರೈಸ್ ಅವರು ಮೈಸೂರು ಸಂಸ್ಥಾನದ ಪುರಾತತ್ವ ಇಲಾಖೆಯ ಮೊದಲ ನಿರ್ದೇಶಕರು. 1886 ರಿಂದ 1908 ರವರೆಗೆ ಅವರು ಮಾಡಿದ ಸಂಶೋಧನೆಯಿಂದಾಗಿ ಶ್ರೀರಂಗಪಟ್ಟಣದ ಮರೆತುಹೋದ ಅನೇಕ ಅಧ್ಯಾಯಗಳು ಬೆಳಕಿಗೆ ಬಂದವು.

ಶಾಸನಗಳ ಮೂಲಕ ಇತಿಹಾಸ. ರೈಸ್ ಅವರು Epigraphia Carnatica – Vol 3 Mysore District ಕೃತಿಯಲ್ಲಿ ಶ್ರೀರಂಗಪಟ್ಟಣದ 40ಕ್ಕೂ ಹೆಚ್ಚು ಕನ್ನಡ, ಸಂಸ್ಕೃತ ಮತ್ತು ಫಾರ್ಸಿ ಶಾಸನಗಳನ್ನು ದಾಖಲಿಸಿದ್ದಾರೆ. ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ವಿಜಯನಗರದ ರಾಜರು ಮತ್ತು ವಾಡಿಯಾರರು ನೀಡಿದ ದಾನ-ದತ್ತಿಗಳ ವಿವರ, ಜುಮ್ಮಾ ಮಸೀದಿಯ ಶಾಸನಗಳು, ಟಿಪ್ಪುವಿನ ಆಡಳಿತದ ತೆರಿಗೆ ದಾಖಲೆಗಳು ಅವರ ಸಂಶೋಧನೆಯಿಂದಲೇ ನಮಗೆ ಲಭ್ಯವಾಯಿತು.

ಮೈಸೂರು ಗೆಜೆಟಿಯರ್ ನಲ್ಲಿ ವಿಶೇಷ ಅಧ್ಯಾಯ :1897 ರಲ್ಲಿ ಪ್ರಕಟವಾದ “Mysore Gazetteer” ನಲ್ಲಿ ರೈಸ್ ಅವರು ಶ್ರೀರಂಗಪಟ್ಟಣಕ್ಕೆ ಪ್ರತ್ಯೇಕ 50 ಪುಟಗಳನ್ನು ಮೀಸಲಿಟ್ಟರು. ವಿಜಯನಗರದಿಂದ ಬ್ರಿಟಿಷರ ಆಳ್ವಿಕೆಯವರೆಗಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಶಾಸನ ಮತ್ತು ದಾಖಲೆಗಳ ಆಧಾರದಲ್ಲಿ ವಿವರಿಸಿದರು.

ಹೈದರ್ ಮತ್ತು ಟಿಪ್ಪುವಿನ ಕಾಲದ ದಾಖಲಾತಿ : ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ದರಿಯಾ ದೌಲತ್ ಬಾಗ್ ನಲ್ಲಿರುವ ಮರದ ಕೆತ್ತನೆ ಮತ್ತು ಗೋಡೆ ಚಿತ್ರಗಳ ಐತಿಹಾಸಿಕ ಮಹತ್ವವನ್ನು ಮೊದಲು ಗುರುತಿಸಿದವರು ರೈಸ್. 1799 ರ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ನಕ್ಷೆ, ಕೋಟೆಯ ರಚನೆ, ಯುದ್ಧ ನಡೆದ ಸ್ಥಳಗಳ ಬಗ್ಗೆ ಅವರು ಮಾಡಿದ ಸಮಗ್ರ ವರದಿ ಇಂದಿಗೂ ಸಂಶೋಧಕರಿಗೆ ಆಧಾರ ಗ್ರಂಥವಾಗಿದೆ.

ಶ್ರೀರಂಗಪಟ್ಟಣದಲ್ಲಿ ಬಿಳಿ ಕನ್ನಡಿಗ ಎಂದೇ ಖ್ಯಾತ ಹೊಂದಿದ್ದ ಬಿ ಎಲ್ ರೈಸ್ ರವರ 189ನೇ ವರ್ಷದ ಜನ್ಮದಿನದ ಅಂಗವಾಗಿ, ಸಮರ್ಪಣಾ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್. ಜಯಶಂಕರ್ ಮಾತನಾಡಿ, “ರೈಸ್ ಅವರು ಕೇವಲ ದಾಖಲೆ ಮಾಡಲಿಲ್ಲ. ಶ್ರೀರಂಗಪಟ್ಟಣದ ಪ್ರತಿ ಕಲ್ಲಿನಲ್ಲೂ ಇರುವ ಕಥೆಯನ್ನು ಜಗತ್ತಿಗೆ ತಿಳಿಸಿದರು” ಎಂದು ಹೇಳಿದರು.ಇಂದು ಜುಲೈ 17 ರಂದು ಅವರ ಜನ್ಮದಿನದಂದು ಶ್ರೀರಂಗಪಟ್ಟಣದ ಜನತೆ ಆ ಮಹಾನ್ ಸಂಶೋಧಕರಿಗೆ ನಮನ ಸಲ್ಲಿಸುತ್ತಿದೆ ಎಂದು ಹೇಳಿದರು.

Share it :

Leave a Reply

Your email address will not be published. Required fields are marked *